ಸ್ವಾಧ್ಯಾಯ September 19, 2026 ಗ್ರಂಥಗಳು ತೋರಬಹುದು ಬೆಳಕಿನ ದಾರಿ,ನಡೆದ ಹೆಜ್ಜೆಯೇ ನಮ್ಮ ಸ್ವಂತ ಸವಾರಿ;ಪ್ರತಿದಿನದ ಬದುಕೇ ಒಂದೊಂದು ಪುಟ,ತಪ್ಪು ಒಪ್ಪುಗಳೇ ಮೌನದ ಪಾಠ;ತನ್ನನ್ನೇ ಓದಲು ಕಲಿತ ದಿನದಿಂದ,ಬದುಕೇ ಗ್ರಂಥ, ಅನುಭವವೇ ಗುರು. ~ಮಾಹೆ
ಸಾಧನೆ September 18, 2026 ಏಕಾಂತದ ಮೌನದಲಿ ಶಾಂತವೆನಿಸಿದ ಮನ,ಲೋಕದ ಗದ್ದಲದಲಿ ಉಳಿದರೆ ಅಪ್ಪಟ ಚಿನ್ನ;ನಿಂದೆ ಬಂದರೂ, ನಷ್ಟ ಕಾಡಿದರೂ,ನಮ್ಮವರೇ ಮನದಂತೆ ನಡೆಯದಿದ್ದರೂ;ಅಲುಗದ ಅರಿವೇ ಸಾಧನೆಯ ನಿಜ ಫಲ,ಪ್ರಪಂಚವೇ ಪರೀಕ್ಷೆ, ಪ್ರತಿಕ್ರಿಯೆಯೇ ಸ್ವಾನುಭವ. ~ಮಾಹೆ
ಮೋಕ್ಷ September 17, 2026 ಕನಸಿನ ಸುಖದುಃಖ, ಎಚ್ಚರದಲಿ ಎಲ್ಲಿ?ಓಟ ನಿಂತ ಮೇಲೆ ನೆರಳಿನ ಓಟವೆಲ್ಲಿ?ವಿಷಯಗಳ ಹಿಂದೆ ಓಡುವ ಮನವೇ ಮಾಯೆ,ನಿಂತು ತನ್ನನು ಕಂಡರೆ ಕರಗುವುದು ಛಾಯೆ;ಮೋಕ್ಷವೆಂದರೆ ತಲುಪಬೇಕಾದ ಜಾಗವಲ್ಲ,ಅಜ್ಞಾನದ ನಿದ್ದೆಯಿಂದ ಎಚ್ಚರಾಗುವುದಷ್ಟೇ. ~ಮಾಹೆ